ಪ್ರೂಡಾನ್, ಪ್ಯೇರ್ ಜೋಸೆಫ್ 1809-65. ಫ್ರೆಂಚ್ ಪತ್ರಿಕೋದ್ಯಮಿ ರಾಜಕಾರಣಿ. ಅರಾಜಕತಾವಾದದ ಜನಕವೆಂದು ಪ್ರಸಿದ್ಧನಾಗಿದ್ದಾನೆ. ಸಮಾಜ ಸುಧಾರಣಾವಾದಿ, ನೀತಿಜ್ಞ. 1809ರ ಜನವರಿ 15ರಂದು ಫ್ರಾನ್ಸಿನ ಬೆಸಾನ್ಸನ ಎಂಬಲ್ಲಿ ರೈತಮನೆತನದಲ್ಲಿ ಹುಟ್ಟಿದ. ಕಡು ಬಡತನದಿಂದಾಗಿ ಈತ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಬಾಲ್ಯದಲ್ಲಿಯೇ ಶಾಲೆಗೆ ಹೋಗುವುದರ ಬದಲು ಚಿಕ್ಕಪುಟ್ಟ ಕೆಲಸ ಮಾಡುತ್ತಾ ಜೀವನ ಸಾಗಿಸಬೇಕಾಗಿತ್ತು. ಹತ್ತೊಂಬತ್ತನೆಯ ವಯಸಿನಲ್ಲಿ ಮುದ್ರಣಾಲಯದಲ್ಲಿ ಕೆಲಸಕ್ಕೆ ಸೇರಿದ. ಪ್ರೂಡಾನ್‍ಗೆ ವ್ಯಾಸಂಗದಲ್ಲಿ ಆಸಕ್ತಿ ಬೆಳೆಯಿತು. ಬಿಡುವಿನ ಸಮಯದಲ್ಲಿ ಈತ ಅಭ್ಯಾಸನಿರತನಾಗುತ್ತಿದ್ದ, ಕೆಲವು ವರ್ಷಗಳಲ್ಲೇ ಲ್ಯಾಟಿನ್, ಗ್ರೀಕ್ ಮತ್ತು ಹೀಬ್ರೂ ಭಾಷೆಗಳಲ್ಲಿ ಪಾಂಡಿತ್ಯ ಸಂಪಾದಿಸಿದ. ವಿದ್ಯಾರ್ಥಿವೇತನವೊಂದನ್ನು ಪಡೆದು ಪ್ಯಾರಿಸಿನಲ್ಲಿ ವ್ಯಾಸಂಗ ನಡೆಸಿದ. ಇವನು ರಾಜ್ಯಶಾಸ್ತ್ರ ಅರ್ಥಶಾಸ್ತ್ರ್ರಗಳಲ್ಲೂ ಆಸಕ್ತಿವಹಿಸಿದ. ಆಸ್ತಿ ಎಂದರೇನು ಎಂಬುದನ್ನು ಕುರಿತು ಇವನ ಮೊದಲನೆಯ ಪುಸ್ತಕ ಪ್ರಕಟವಾದ್ದು ಪ್ಯಾರಿಸಿನಲ್ಲೇ (1840). ಖಾಸಗಿ ಆಸ್ತಿ ಎಂದರೆ ಕಳ್ಳತನ ಎಂಬುದು ಪ್ರೂಡಾನ್ ಅಭಿಪ್ರಾಯವಾಗಿತ್ತು. ಆದರೆ ಖಾಸಗಿ ಆಸ್ತಿಯನ್ನು ಇವನ್ನು ವಿರೋಧಿಸಲಿಲ್ಲ. ಆಸ್ತಿ ಇಲ್ಲದವರನ್ನು ಶೋಷಿಸಲು ಆಸ್ತಿಯನ್ನು ಬಳಸಿಕೊಳ್ಳುವುದನ್ನು ಇವನು ವಿರೋಧಿಸಿದ. ಅದನ್ನು ಮಾನವೀಯವಾಗಿ ಮಾಡಬೇಕು. ಅದರ ಮೂಲಕ ಕೆಲಸಗಾರರು ಉತ್ಪಾದನ ಸಾಧನಗಳನ್ನು ಪಡೆದುಕೊಳ್ಳಲು ಸಾಧ್ಯವಾಗಬೇಕು ಎಂದು ಈತ ವಾದಿಸಿದ. ಸಣ್ಣ ಉದ್ಯಮಗಳ ಒಡೆಯರು ಸಂಘಗಳನ್ನು ರಚಿಸಿಕೊಂಡು ಪರಸ್ಪರ ಸಹಾಯದಿಂದ ಉದ್ಯಮಗಳನ್ನು ನಡೆಸಬೇಕೆಂದು ಇವನು ಬೋಧಿಸಿದ. ಉತ್ಪಾದಕ ಆಸ್ತಿ ಆದಷ್ಟು ವ್ಯಾಪಕವಾಗಿ ಹರಡಬೇಕು. ಅದು ಕೆಲವರಲ್ಲಿ ಕೇಂದ್ರೀಕೃತವಾಗುವುದರ ಬದಲು ಹಲವು ಮಂದಿ ಉತ್ಪಾದಕರಲ್ಲಿ ಹಂಚಿಕೆಯಾಗಬೇಕು. ಉತ್ಪಾದಕರು ಉದ್ಯಮಗಳ ಒಡೆಯರಾಗಬೇಕು ಎಂದು ಇವನು ವಾದಿಸಿದ. ಬ್ಯಾಂಕ್ ಆಫ್ ಫ್ರಾನ್ಸಿನ ಸ್ಥಾನದಲ್ಲಿ ಜನತೆಯ ಬ್ಯಾಂಕು ಸ್ಥಾಪಿತವಾಗಬೇಕೆಂದು ಇವನ ಆಶಯವಾಗಿತ್ತು. ಕಡಿಮೆ ಬಡ್ಡಿ ದರದಲ್ಲಿ ಇದು ಉದರಿ ನೀಡಬೇಕು ಎಂದು ಇವನು ಹೇಳಿದ. ಹಣ ಮತ್ತು ಉದರಿಗೆ ಚಿನ್ನ ಅಥವಾ ಯಾವುದೇ ಲೋಹ ಆಧಾರವಾಗಿರಬಾರದು, ಅದರ ಬದಲು ಇಡೀ ಆರ್ಥಿಕತೆಯೇ ಸಾರ್ವತ್ರಿಕ ಪತ್ತಿನ ಕೂಟವಾಗಬೇಕು. ಪತ್ತಿಗೆ (ಉದರಿಗೆ) ಉತ್ಪಾದನೆಯೇ ಆಧಾರವಾಗಬೇಕು. ಚಿನ್ನವಲ್ಲ. ದುಡಿಮೆ ಹಾಗೂ ಅದರ ಪ್ರತಿಯೊಂದು ಉತ್ಪಾದನೆ-ಇದೇ ಹಣದಂತೆ ಪರಿವರ್ತನ ಮಾಧ್ಯಮವಾಗಬೇಕು. ಸರಕು ಅಥವಾ ಸೇವೆಯ ರೂಪದಲ್ಲಿ ಹಣವನ್ನು ಕೂಡಿಡುವುದು ಸಾಧ್ಯವಾಗುವುದಿಲ್ಲವಾದ್ದರಿಂದ ಅಂತಿಮವಾಗಿ ಸರಬರಾಜಾಗುವ ಸರಕು ಹಾಗೂ ಸೇವೆಗಳು ಸ್ವಯಮೇವ ಬೇಡಿಕೆಯನ್ನು ಸೃಷ್ಟಿಸುತ್ತವೆ. ಅತ್ಯುತ್ಪಾದನೆಯೂ ತತ್ಛಲವಾದ ನಿರುದ್ಯೋಗವೂ ಇದರಿಂದ ತಪ್ಪುತ್ತವೆ. ಲೋಹದ ಬದಲು ಉತ್ಪಾದಕತೆಯ ಆಧಾರದ ಮೇಲೆ ನಿರ್ಮಿತವಾದ ಹಣವ್ಯವಸ್ಥೆಯಿರುವುದರಿಂದ ಉತ್ಪಾದನೆಯ ನಿಜವಾದ ವೆಚ್ಚಕ್ಕೆ ಅತ್ಯಂತ ಹತ್ತಿರದ ಬೆಲೆಗಳಲ್ಲಿ ಬಳಕೆದಾರರು ಸರಕುಗಳನ್ನು ಕೊಳ್ಳಬಹುದು. ಬಡ್ಡಿ, ಗೇಣಿ, ಸ್ವತಃ ಉತ್ಪಾದನೆಯಲ್ಲಿ ಭಾಗವಹಿಸಿದ ಬಂಡವಾಳಗಾರರೂ ನೆಲದೊಡೆಯರೂ ಸಟ್ಟಾ ವಹಿವಾಟುದಾರರೂ ಹೇರುವ ಉಪರಿಶುಲ್ಕಗಳು ಮುಂತಾದವು ಬೆಲೆಗಳಲ್ಲಿ ಸೇರಿಕೊಳ್ಳುವುದಿಲ್ಲ. ಅಲ್ಲದೆ, ರಾಜಕೀಯವಾಗಿ ಬಲಿಷ್ಠವಾದ ವಿಶಿಷ್ಟ ಹಿತಾಸಕ್ತ ಗುಂಪುಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ಹಣವನ್ನು ಸೃಷ್ಟಿಸುವುದಾಗಲಿ, ಅದರಲ್ಲಿ ಕೈವಾಡ ನಡೆಸುವುದಾಗಲಿ ಸಾಧ್ಯವಾಗುವುದಿಲ್ಲ. ಏಕೆಂದರೆ ಸರ್ಕಾರದ ಹಸ್ತಕ್ಷೇಪವಿಲ್ಲದೆ, ಖಾಸಗಿ ಉತ್ಪಾದಕರು ಉತ್ಪಾದನ ಸಂಬಂಧವಾಗಿ ನಡೆಸುವ ವಹಿವಾಟುಗಳ ಪಡಿನೆಳಲೇ ಹಣವಾಗಿರುತ್ತದೆ.

	ಹಣ ಸುಧಾರಣೆಯ ವಿಚಾರಗಳಿಗೆ ಮಾತ್ರವೇ ಪ್ರೂಡಾನನ ಸಲಹೆಗಳು ಸೀಮಿತವಾಗಿರಲಿಲ್ಲ. ಉತ್ಪಾದನೆಮಾಡುವ ಉದ್ಯಮಗಳ ಒಡೆಯದ ಸಂಘಗಳ ಪರಿಕಲ್ಪನೆಯನ್ನೂ ನೀಡಿದ. ಇಂಥ ಪ್ರತಿ ಸಂಘವೂ ತನ್ನದೇ ಆದ ಆಂತರಿಕ ನಿಬಂಧನೆಗಳನ್ನು ರಚಿಸಿಕೊಳ್ಳಬೇಕು. ಇಡೀ ಸಂಘದ ಒಳತಿಗಾಗಿ ಪ್ರತಿಯೊಬ್ಬ ಸದಸ್ಯನೂ ತನ್ನ ಸ್ವಂತ ಅನುಕೂಲಗಳನ್ನು ಬಿಟ್ಟುಕೊಡಬೇಕು. ಉದ್ಯಮಿಗಳ, ಕೆಲಸಗಾರರ ಕೃಷಿಕರ ವಿವಿಧ ಸಂಘಗಳ ನಡುವೆ ಕೊಡು-ಕೊಳು ಮನೋಭಾವ ಬೆಳೆಯಬೇಕು. ವಿವಿಧ ಗುಂಪುಗಳ ನಡುವಣ ಈ ಪಾರಸ್ಪರ್ಯದಿಂದ ನ್ಯಾಯವಾದ ಆರ್ಥಿಕತೆಗೆ ಎಡೆ ಉಂಟಾಗುತ್ತದೆ. ಇದು ಸರ್ಕಾರದಿಂದ ನಿರ್ಣಯವಾದ ಆರ್ಥಿಕನ್ಯಾಯವಲ್ಲ. ಉತ್ಪಾದಕರ ಶ್ರೇಣಿಗಳಿಂದ ವಿಕಾಸಗೊಂಡ ನ್ಯಾಯ.

	ಪ್ರೂಡಾನನ ಅರ್ಥಿಕ ಸುಧಾರಣೆಯ ಕಾರ್ಯಕ್ರಮವನ್ನು ಕಾರ್ಲ್ ಮಾಕ್ರ್ಸ್ ವಿರೋಧಿಸಿದ. ಪ್ರೂಡಾನ್ ಅಳಿಸಿಹಾಕಲು ಯತ್ನಿಸಿದ. ವಿತ್ತೀಯ ಬಂಡವಾಳವಾದವೂ ಇವನು ಸ್ಥಾಪಿಸಬಯಸಿದ ಕೈಗಾರಿಕಾ ಬಂಡವಾಳವೂ ಪರಸ್ಪರ ಸಂಬಂಧಿಗಳು-ಎಂಬುದು ಈ ವಿರೋಧಕ್ಕೆ ಕಾರಣ. ಬಂಡವಾಳವಾದಿ ಉತ್ಪಾದನೆಯಲ್ಲಿ ಉತ್ಪಾದನೆ ಸಂಯೋಜಿತವಾಗಿರುವುದಿಲ್ಲ. ಇದರಿಂದ ಆರ್ಥಿಕ ಅಸ್ಥಿರತೆ ಉಂಟಾಗುತ್ತದೆ. ಇದರ ಅಡಿಯಲ್ಲಿ ಸಟ್ಟಾ ಚಟುವಟಿಕೆ ಬೆಳೆಯುತ್ತದೆ. ಆರ್ಥಿಕ ಶಕ್ತಿಯ ಸಾಂದ್ರೀಕರಣವಾಗುತ್ತದೆ. ದುಡಿಮೆಯ ಶೋಷಣೆಯಾಗುತ್ತದೆ. ಆದ್ದರಿಂದ ಉತ್ಪಾದಕರ ನಡುವೆ ಬೆಳೆಯುವುದೆಂದು ಪ್ರೂಡಾನ್ ಆಶಿಸಿದ ಸಾಮರಸ್ಯ ವರ್ಧಿಸುವುದಿಲ್ಲ ಎಂದು ಮಾಕ್ರ್ಸ್ ಹೇಳಿದ. ಇವರಿಬ್ಬರ ನಡುವೆ ವಾದ ಬೆಳೆಯಿತು. ಮಧ್ಯಮ ವರ್ಗದ ಸುಧಾರಣಾವಾದಿಗಳ ಹಾಗೂ ಸಮಾಜವಾದಿ ಪರಿವರ್ತನೆ ವಾದಿಗಳ ನಡುವಣ ವಿವಾದದ ಮೂಲ ಇದು.

	ಪ್ರೂಡಾನ್ ವೃತ್ತಿಯಿಂದ ತತ್ತ್ವಜ್ಞನಲ್ಲ. ಅವನದು ಅದೊಂದು ಪ್ರವೃತ್ತಿ. ಇವನ ಬರವಣಿಗೆಯಲ್ಲಿ ಆಳವಾಗಿ ಹೊಕ್ಕು ನೋಡುವ ವಿಶ್ಲೇಷಿಸುವ ಪ್ರಯತ್ನವಿರಲಿಲ್ಲ. ಕೃಷಿಕನ ಪ್ರತಿಭಟನಾತ್ಮಕ ಪ್ರವೃತ್ತಿ, ಅಂತರರಾಷ್ಟ್ರೀಯವೆಂದುಕೊಂಡ ಬದುಕಿನ ಭವ್ಯದೃಷ್ಟಿ ಇವುಗಳ ಸಮ್ಮಿಲನವನ್ನು ಕಾಣಬಹುದು. ಇವನ ಚಿಂತನೆ ಹಾಗೂ ಕೃತಿಗಳಲ್ಲಿ ಅನಾಯಕತ್ವ ಹಾಗೂ ನಿರಂಕುಶ ಪ್ರಭುತ್ವ ಇವುಗಳ ನಡುವೆ ಫ್ರೆಂಚ್ ಬಂಡವಾಳವಾದಿ ಪ್ರಜಾಪ್ರಭುತ್ವದ ತೊಳಲಾಟವನ್ನು ಕಾಣಬಹುದು. ಪ್ರೂಡಾನನ ಹಲವು ಪುಸ್ತಕಗಳು ಫ್ರೆಂಚ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದವಾಗಿವೆ. ಪ್ರೂಡಾನ್ 1865 ಜನವರಿ 19ರಂದು ಪ್ಯಾರಿಸಿನಲ್ಲಿ ತೀರಿಕೊಂಡ.
(ಎಸ್.ಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ